Thursday, September 25, 2014

ಉತ್ತಮ ಸಂದೇಶದ, ಕಲಾತ್ಮಕ ಕಿರುಚಿತ್ರ - 'ಛದ್ಮವೇಷ'.

*****SPOILER ALERT*****

ಇತ್ತೀಚಿಗೆ ಯಥೇಚ್ಛ ಸಂಖ್ಯೆಯಲ್ಲಿ ಕಿರುಚಿತ್ರಗಳು ಬರುತ್ತಿವೆ. ಇವುಗಳಲ್ಲಿ  ಕೆಲವು, ಎರಡುವರೆ ಗಂಟೆ ಸಿನೆಮಾದಲ್ಲಿ ಹೇಳಲಾಗದ್ದನ್ನು ಕೆಲವೇ ನಿಮಿಷಗಳಲ್ಲಿ, ಅಚ್ಚುಕಟ್ಟಾಗಿ ಹೇಳಿ ನೆನಪಿನಲ್ಲುಳಿಯುತ್ತವೆ. ಈ ಚಿತ್ರವೂ ಹಾಗೆಯೆ. 

ದ್ರೌಪದಿಯ ಪಾತ್ರವೇ ತಾನಾಗಿ ನಟಿಸುವ ಕಲಾವಿದೆಯೊಬ್ಬಳು ಈ ಕತೆಯಲ್ಲಿ ಶೋಷಿತೆ. ಸೋಮಾರಿ, ಕುಡುಕ ಗಂಡ. ಕಷ್ಟಕ್ಕೆ ನೆರವಾಗುವ ತಮ್ಮನಂತಹ ಗೆಳೆಯನ ಜೊತೆಗೇ ಸಂಬಂಧ ಕಲ್ಪಿಸಿ ಕುಟುಕುವಾಗಷ್ಟೆ ಅವ ಬಾಯ್ತೆರೆದು ಮಾತಾಡುವುದು. ದ್ರೌಪದಿಯ ಸ್ವಗತ ಹಾಗೂ ಕಲಾವಿದೆಯ ಸ್ವಂತ ಕತೆಗಳು ಜತೆಯಾಗಿ ಬೆಸೆದು ಕಿರುಚಿತ್ರವಾಗುತ್ತ ಸಾಗುತ್ತವೆ.

ಅಂತಃಪುರದಲ್ಲಿ ಕುಳಿತು ಆಳವಾದ ಯೋಚನಾ ಲಹರಿಯಲ್ಲಿ ಮುಳುಗುವ ದ್ರೌಪದಿ, ತನ್ನ ಜೀವನದ ಅನೇಕ ಘಟ್ಟಗಳಲ್ಲಿ ತನ್ನ ಸ್ವಾತಂತ್ರ ಯಾರ್ಯಾರದೋ ಕಾಲ ಕಸವಾದ ಘಟನೆಗಳ ವಿಮರ್ಶೆಗೆ ತೊಡಗುತ್ತಾಳೆ.
"ಚಿಕ್ಕ ವಯಸ್ಸಿನಲ್ಲಿ ಸೋದರ ದೃಷ್ಟದ್ಯುಮ್ನನಿಗಿಲ್ಲದ ಸಾವಿರ ನಿರ್ಬಂಧಗಳ ಹೆಣ್ಣೆಂಬ ಕಾರಣಕ್ಕೆ ತನ್ನ ಮೇಲೆ ಹೇರಿದ ಅಮ್ಮ; ಹೆಸರಿಗೆ ಮಾತ್ರ 'ಸ್ವಯಂವರ' ಏರ್ಪಡಿಸಿ, ಗುರಿಗೆ ಬಾಣ ನೆಟ್ಟವ ಮುದುಕನಾದರೂ ಹಾರ ಹಾಕಬೇಕೆಂದ ಅಪ್ಪ; ಕೆಲಸಕ್ಕೆ ಬಾರದ ಧರ್ಮಪಾಲನೆಗಾಗಿ ಐದು ಗಂಡಸರಿಗೆ ತನ್ನ ಹಂಚಿದ ಅತ್ತೆ ಕುಂತಿ. ಇವರೆಲ್ಲ ನನ್ನವರೇ ಆಗಿ ನನ್ನನ್ನು ಶೋಷಣೆಗೆ ತಳ್ಳಿದವರು" - ದ್ರೌಪದಿಗೆ ತನ್ನವರ ಮೇಲಿದ್ದ ತಿರಸ್ಕಾರ ಗೋಚರವಾಗುತ್ತದೆ.
ಮುಂದುವರಿದಂತೆ, ತನ್ನನ್ನು ವಸ್ತುವಂತೆ ಮಾರಿಕೊಂಡ ಧರ್ಮರಾಯ(!)ನ ಭಂಡತನ, ವಸ್ತ್ರಾಪಹರಣದ ಸಮಯದಲ್ಲಿ ನಿಸ್ಸಹಾಯಕರಾಗಿ ಕೈ ಕಟ್ಟಿ ನಿಂತಿದ್ದ ಪಾಂಡವರ ಮತ್ತು ತುಟಿ ಪಿಟುಕ್ಕೆನದೆ ಕುಳಿತಿದ್ದ  ಗಂಡಸರೆಲ್ಲರ ಹೇಡಿತನಗಳ ನೆನೆದು ಕಿಡಿ ಕಾರುತ್ತಾಳೆ. ಅಷ್ಟು ಜನ ಗಂಡಸರಿದ್ದೂ ಒಂದು ಹೆಣ್ಣಿನ ಅತ್ಯಾಚಾರ ತಡೆಯಲು ಯಾರೂ ಮುಂದೆ ಬಾರದ್ದನ್ನು ನೆನೆದು ಒಬ್ಬೊಬ್ಬರನ್ನೇ ಹಳಿಯುತ್ತಾಳೆ. ಆ ಸಂದರ್ಭದಲ್ಲಿ, ಕೃಷ್ಣ ಬರದಿದ್ದರೆ ನಗ್ನವಾಗುತ್ತಿದ್ದು ನಾನಲ್ಲ, ಅಲ್ಲಿ ನೆರೆದಿದ್ದ ಗಂಡಸರ ಚಾರಿತ್ರ್ಯ. ಕೃಷ್ಣ ಬರಬಾರದಿತ್ತು ಎಂದು ನಿಟ್ಟುಸಿರು ಬಿಡುತ್ತಾಳೆ.

ಹೀಗೆ, ಜೀವನದುದ್ದಕ್ಕೂ ತನಗಾದ ಶೋಷಣೆಗೆ ಕಾರಣರಾದವರನ್ನು ಒಬ್ಬೊಬ್ಬರಂತೆ ದೂಷಿಸಿ ಮುಗಿಸುವಷ್ಟರಲ್ಲಿ ಒಂದು ಅಶರೀರವಾಣಿ  ಪ್ರಶ್ನಿಸುತ್ತದೆ - "ಇಷ್ಟೆಲ್ಲ ನಡೆಯುವಾಗ ನೀನೇನು ಮಾಡ್ತಿದ್ದೆ?". ಸರಳ ಮತ್ತು ತರ್ಕಬದ್ಧವಾದ ಪ್ರಶ್ನೆ ಅಲ್ವಾ? ಅಶರೀರವಾಣಿಯನ್ನು ಅವಳ ಸುಪ್ತಮನಸ್ಸು ಅಥವಾ ಅಂತರಾತ್ಮವೆಂದರ್ಥೈಸಬಹುದು.

ಆ ದನಿ, ದ್ರೌಪದಿಯ ಆಂತರ್ಯದ ಸಾವಿರ ಪ್ರಶ್ನೆಗಳ ನುಂಗಿ ನಗುವ ಮರುಪ್ರಶ್ನೆಯಾಗುತ್ತದೆ, ದ್ರೌಪದಿಯ ಅಸಹಾಯಕತೆಗೆ ಅದುವರೆಗು ಮರುಕ ತೋರುತ್ತಿದ್ದ ನೋಡುಗರ ಯೋಚನೆಗೆ ಬ್ರೇಕ್ ಹಾಕಿ ತಿರುವು ನೀಡುತ್ತದೆ. ಹೆಣ್ಣಿನ ಶೋಷಣೆಯ ವಿರುದ್ಧ ಜಾಗೃತಿಯ ಕರೆಯಾಗಿ ಪ್ರತಿಧ್ವನಿಸುತ್ತದೆ. ಕತೆಯೊಳಗಿನ ನಾಟಕದಲ್ಲಿ ಬರುವ ಈ ಸನ್ನಿವೇಶ, ಆ ಪಾತ್ರ ನಿರ್ವಹಿಸಿದ ಕಲಾವಿದೆಗೆ ಸ್ಪೂರ್ತಿಯಾಗಿ ಹೇಗವಳ ರಕ್ಷಣೆ ಮಾಡಿತು? - ತಿಳಿಯಲು ಚಿತ್ರ ನೋಡಿ.
 
ನಿಮ್ಮ ಮನೆಯಲ್ಲಿನ ಗಂಡುಮಕ್ಕಳನ್ನ ಜವಾಬ್ದಾರಿಯಿಂದ ಬೆಳೆಸಿ, ಆಗ ಪಕ್ಕದ ಮನೆ ಹೆಣ್ಣು ಮಕ್ಳು ಕ್ಷೇಮವಾಗಿರ್ತಾರೆ ಎಂಬರ್ಥದ ಸಂದೇಶ ಕೊಟ್ರು, ಮೊನ್ನೆ ನಮ್ಮ ಪಿಯೆಮ್ಮು. ಇದಕ್ಕೂ ಮೊದಲೆ ಆ ಸಂದೇಶ ಕೊಟ್ಟ ಚಿತ್ರ 'ಛದ್ಮವೇಷ'. ಕ್ವಾಲಿಟಿ ಅಭಿನಯ, ಅಚ್ಚುಕಟ್ಟಾದ ನಿರ್ದೇಶನ ಮತ್ತು ಒಂದು ಅದ್ಭುತ ಸಂದೇಶ ಇರುವ ಈ ಚಿತ್ರ ನೀವು ನೋಡಲೇಬೇಕು. ಸೌಂಡ್ ಕ್ವಾಲಿಟಿ ಕಡೆ ಸ್ವಲ್ಪ ಗಮನ ಹರಿಸಬೇಕಿತ್ತು. ಕ್ಲೈಮಾಕ್ಸ್ ಅನ್ನು ಸ್ವಲ್ಪ ನಿಧಾನಕ್ಕೆ ತೋರಿಸಿ ಒಂದೇ ಸಾರಿ ನೋಡಿದದವರಿಗೆ ಅರ್ಥವಾಗಿಸಬಹುದಿತ್ತು. ಹೀಗೊಂದೆರಡು ಸಣ್ಣ ಪುಟ್ಟ ಹುಳುಕುಗಳನ್ನ ಕ್ಷಮಿಸಿ, ಒಂದು ಅಪರೂಪದ ಪ್ರಯತ್ನಕ್ಕೆ ಕೈ ಹಾಕಿ ಗುರಿ ಮುಟ್ಟಿದ 'ಛದ್ಮವೇಷ' ತಂಡಕ್ಕೆ ಒಂದು ಶಹಭಾಸ್ ಹೇಳುವ.

Sunday, February 2, 2014

ಮತ್ತೊಂದು ದಿನ ಈ ಸ್ವರ್ಗದೊಳಗೆ (Another Day in Paradise)

ಒಳ್ಳೆಯ ಹಾಡುಗಳೆ ಹಾಗೆ. ಕೆಲವು, ನಾವು ಕಂಡುಕೊಂಡೆವೆಂದುಕೊಂಡ ಬದುಕಿನ ಅರ್ಥಗಳನ್ನೆ ಪ್ರಶ್ನಿಸಿ, ನಮ್ಮ ಗಟ್ಟಿ ನಂಬಿಕೆಗಳನ್ನೆ ಬುಡಮೇಲು ಮಾಡುತ್ತವೆ. ಮತ್ತೆ ಕೆಲವು, ನಮ್ಮ ಚಿಕ್ಕ ಮೆದುಳಿಗೆಂದೂ ನಿಲುಕದಂತಿದ್ದ ಹೊಸ ಭಾವವೊಂದರ ಮುದವಾದ ಅನುಭವ ನೀಡಿ, ನಮ್ಮ ಭಾವಪ್ರಪಂಚದ ಪರಿಧಿಯನ್ನು ಹೆಚ್ಚಿಸಿ ಉಪಕಾರ ಮಾಡುತ್ತವೆ.

ಡಿಗ್ರಿ ಕಾಲೇಜಿನ ಮೆಟ್ಟಿಲು ಹತ್ತುವವರೆಗು ಇಂಗ್ಲಿಷ್ ಹಾಡುಗಳ ಗಂಧವಿರಲಿಲ್ಲ ನನಗೆ. ಇಂಗ್ಲಿಶ್ ಹಾಡುಗಳೆಂದರೆ ರಾಕ್ ಹಾಡುಗಳಷ್ಟೆ, ಸಾಹಿತ್ಯ ಸಮಾಧಿಯ ಮೇಲೆ ಡೋಲುಗಳ ಗದ್ದಲವದೆಂಬ ವಿಚಿತ್ರ ಗ್ರಹಿಕೆ ನನ್ನದಿತ್ತು. ಇಂಜಿನೀರಿಂಗ್ ಕಾಲೇಜಿನಲ್ಲಿ ಸಿಕ್ಕಿದ ಹೊಸ ಗೆಳೆಯರ ಪ್ರಭಾವದಿಂದ ಇಂಗ್ಲಿಷ್ ಹಾಡುಗಳ ಪರಿಚಯವಾಯ್ತು. ಮೊದಲ ಹಂತದಲ್ಲಿ ಕೇಳಿದ Linkin Park, backstreet boys, Beatles ನಂತಹ bandಗಳ ಹಾಡುಗಳು, ನನ್ನ ತಪ್ಪು ತಿಳುವಳಿಕೆಯನ್ನ ತಿದ್ದಿದ್ದವು.

ವಿಶೇಷವಾಗಿ, ಹತ್ತು ವರ್ಷಗಳ ಹಿಂದೆ ಮೊದಲ ಬಾರಿ ಕೇಳಿದಾಗಿನಿಂದ ಇಂದಿಗೂ ನನ್ನ ಅತಿ ಮೆಚ್ಚಿನ ಹಾಡು ಎಂದರೆ, Phil Collinsನ "Another day in Paradise". ಈ ಹಾಡಿನಲ್ಲಿ ನಿಸ್ಸಹಾಯಕ ಹೆಂಗಸೊಬ್ಬಳ ಕೂಗಿಗೆ ಕಿವುಡಾದ ಒಬ್ಬ ದಾರಿಹೋಕ, ಬದುಕಿನಲ್ಲಿ ಎಲ್ಲವೂ ಇದ್ದು ತನ್ನ ಸಣ್ಣ ಸಮಸ್ಯೆಗಳೆನ್ನೆ ದೊಡ್ಡದಾಗಿಸಿಕೊಂಡು ನಿಜವಾದ ನಿಸ್ಸಹಾಯಕರ ನೆರವಿಗೆ ಕೈ ಚಾಚಲು ಸಮಯವಿಲ್ಲದ ನಮ್ಮಂತವರ self centered mentalityಗೆ, lack of compassionಗೆ ಸಾಕ್ಷಿಯಾಗುತ್ತಾನೆ. ತನ್ನ ಅಂತಃಕರಣವನ್ನೆಲ್ಲೋ ಬಚ್ಚಿಟ್ಟು ಮೂಳೆ ಮಾಂಸಗಳ ಮೂಟೆ ಹೊತ್ತು ನಡೆದಾಡುವ ನಿಷ್ಕಾರುಣ ಪ್ರಾಣಿಯಾಗಿ ಅಸಹ್ಯ ತರಿಸುತ್ತಾನೆ. ಆದರೆ ಕೊನೆಗೆ ಅಯ್ಯೊ, ನಾನೂ ಒಂದು ದಿನ ಹೀಗೆ ಮಾಡಿದ್ದೆನಲ್ಲೆವೆ ಎಂದೆನಿಸಿ ನಮ್ಮ ಪ್ರತಿಬಿಂಬದಂತೆ ಮುಂದೆ ನಿಂತು ನಾಚಿಕೆ ಹುಟ್ಟಿಸುತ್ತಾನೆ. ಇದು ನನ್ನ ಅನಿಸಿಕೆ, ನಾ ಮಾಡಿಕೊಂಡ ಅರ್ಥದ ಪ್ರವರ. ನಿಮಗೆ ಈ ಹಾಡು ಬೇರೆಯದೇ ರೀತಿಯಲ್ಲಿ ಅರ್ಥವಾಗಿರಲೂ ಬಹುದು.

ನನಗೆ ಅರ್ಥವಾದ ಮಟ್ಟಿಗೆ ಈ ಹಾಡಿನ ಅನುವಾದಕ್ಕೆ ಯತ್ನ ಮಾಡಿದ್ದೀನಿ. ಇದರ ಆಶಯವಿಷ್ಟೆ: ತಿರುಗಿಯೂ ನೋಡದೆ ಮುಂದೆ ಹೋದ ದಾರಿಹೋಕನದ್ದೆ ಕತೆ ನಿಮ್ಮದೂ ಇರಬಹುದು, ನನ್ನದೂ ಇರಬಹುದು. ನಮ್ಮದೇನೆ ಸಮಸ್ಯೆ, ಕಷ್ಟವಿರಲಿ - ಬೇರೊಬ್ಬರ ನೋವಿಗೆ ಸ್ಪಂದಿಸುವಷ್ಟು ಸಮಯ, ಕನಿಕರ ನಮಗೆ ಇರಲಿ.

Link to the song: http://www.youtube.com/watch?v=Qt2mbGP6vFI

ಕೂಗಿ ಕರೆದಳು ಅವಳು ದಾರಿಹೋಕನೊಬ್ಬನ
ಸ್ವಾಮಿ, ನೆರವು ಬೇಕಿದೆ, ನಿಲ್ಲಿ.
ಕೊರೆವ ಚಳಿ ಇಲ್ಲಿ, ಇರಲು ಆಶ್ರಯವಿಲ್ಲ
ತಂಗಲೊಂದಿದೆಯೆ ಜಾಗ ದಯಮಾಡಿ ಹೇಳಿ.

ಅವ ನಡೆದ ಮುಂದೆ, ತಿರುಗಿಯೂ ನೋಡದೆ
ನಟಿಸಿ ಅವಳ ಕರೆ ತನಗೆ ಕೇಳದಿದ್ದ ಹಾಗೆ.
ಸಾಗಿದ ಸೀಟಿ ಊದುತ್ತ ರಸ್ತೆ ದಾಟಲು
ಮುಜುಗರವಾಗಿತ್ತವನಿಗೆ ಅವಳ ಬಳಿ ನಿಲ್ಲಲು.

ಮತ್ತೊಮ್ಮೆ ಯೋಚಿಸಿ!
ಸ್ವರ್ಗದೊಳಗಿದು ಮತ್ತೊಂದು ದಿನ ನಿಮಗೂ ನನಗೂ.
ಮತ್ತೊಂದು ದಿನ ಈ ಸ್ವರ್ಗದೊಳಗೆ.

ಕೂಗಿ ಕರೆದಳು ಅವಳು ದಾರಿಹೋಕನೊಬ್ಬನ
ಅತ್ತು ಬಾಡಿದ ಅವಳ ಮುಖ ಅವನಿಗೆ ಕಂಡಿತ್ತು.
ಆವಳ ಪಾದಗಳಲ್ಲಿ ಬಿಸಿಯ ಗುಳ್ಳೆಗಳೆದ್ದು
ನಡೆಯಲಾಗದೆ ಹೋದರೂ ಪ್ರಯತ್ನ ಸಾಗಿತ್ತು.

ಮತ್ತೊಮ್ಮೆ ಯೋಚಿಸಿ!
ಓ ದೇವರೇ, ಯಾರಿಂದಲೂ ಏನೂ ಮಾಡಲಾಗದೇ?
ಓ ದೇವರೇ, ನೀನೇನು ಹೇಳುವೆ?

ಅವಳ ಮುಖದ ಮೇಲಿನ ಗೆರೆಗಳು ಹೇಳಿವೆ
ಅವಳು ನಡೆದ ದಾರಿ ಸುಲಭದ್ದಿರಲಿಲ್ಲ
ಎಷ್ಟೊ ಜಾಗಗಳಿಂದ ಹೊರಗೆ ತಳ್ಳಲ್ಪಟ್ಟವಳು
ನತದೃಷ್ಟೆ ಇವಳು ಎಲ್ಲು ಸಲ್ಲಲೇ ಇಲ್ಲ.

ಮತ್ತೊಮ್ಮೆ ಯೋಚಿಸಿ!