
ಆಘಾತ:
ಆವತ್ತು ಬಂದ ಒಂದು ಫೋನ್ ಕರೆ, ಆ ಸುದ್ದಿ ಯಾವ ಶತ್ರುವಿಗೂ ಬರೋದು ಬೇಡ. ೨೦೧೦ ಅಕ್ಟೋಬರ್ ೧೭ ಭಾನುವಾರ ರಾತ್ರಿ ೧೦ ಗಂಟೆ. ಆಗ ತಾನೆ ಊಟ ಮುಗಿಸಿ ಗೆಳೆಯರ ಜೊತೆ ಕಮಲ್ ಹಾಸನ್ ಅಭಿನಯದ ಮಹಾನದಿ ಸಿನಿಮಾ ನೋಡ್ತಾ ಇದ್ದೆ. ಫೋನ್ ರಿಂಗ್ ಅದಾಗ ಕೈಗೆತ್ತಿಕೊಂಡು, ರಿಂಗ್ ನಿಲ್ಲಲಿ ಅಂತ ಕಾದೆ. ನನ್ತಂಗಿ ಯಾವಾಗಲು ಮಿಸ್ ಕಾಲ್ ಕೊಡ್ತಿದ್ದೋಳು, ಯಾಕೋ ಕಾಲ್ ಕಟ್ ಮಾಡ್ತಾನೆ ಇಲ್ಲ. ಕೋತಿ ಡಯಲ್ ಮಾಡಿ ಮರ್ತಿರ್ಬೇಕು ಅನ್ಕೊಂಡೆ. ರಿಂಗ್ ನಿಂತ ಮೇಲೆ ವಾಪಾಸ್ ಕಾಲ್ ಮಾಡಿದಾಗ ಮಮತ ಮೊದಲನೇ ರಿಂಗಿಗೆ ಫೋನ್ ತಗೊಂಡು ಒಂದ್ಸಲ 'ವಿನಿ' ಅಂದಿದ್ದಷ್ಟೇ. ಮತ್ತೆ ಹತ್ತಿಪ್ಪತ್ತು ಸೆಕೆಂಡುಗಳು ನನಗೆ ಅಳುವಷ್ಟೇ ಕೇಳ್ಸಿದ್ದು. ಬಿಕ್ಕಿ ಬಿಕ್ಕಿ ಅಳ್ತಿದ್ದ ಅವಳ ದನಿ ಕೇಳಿ ನನಗೆ ಗಂಟಲು ಒಣಗಿತ್ತು. ಅಮ್ಮ ಅಮ್ಮ ಅಂತ ಮೂರ್ನಾಲ್ಕು ಸಾರಿ ಬಿಕ್ಕಿ, ಅಮ್ಮಂಗೆ ಹಾರ್ಟ್ ಅಟ್ಯಾಕ್ ಆಯಿತು ಆಸ್ಪತ್ರೆಲಿದೀನಿ ಅಂತ ಅವಳನ್ದಾಗ ಏನು ಹೇಳಬೇಕು, ಏನು ಮಾಡಬೇಕು ಒಂದೂ ತಿಳೀಲಿಲ್ಲ.
ಅಮ್ಮ ಶನಿವಾರ ಫೋನ್ ಮಾಡಿ, ನಾಳೆ ಮಮತನ ಜೊತೆ ಬೆಂಗಳೂರಿಗೆ ಹೋಗ್ತೀನಿ. ಸಾಯಿಬಾಬ ಆಸ್ಪತ್ರೆಯಲ್ಲಿ ಚೆನ್ನಾಗಿ ಚೆಕ್ ಅಪ್ ಮಾಡ್ತಾರಂತೆ ಅಂದಾಗ ಸರಿ ಹುಷಾರು ಅಂತಷ್ಟೇ ಹೇಳಿದ್ದೆ. ಭಾನುವಾರ ಸಂಜೆ ಬೆಂಗಳೂರಿಗೆ ಬಂದ ಅಮ್ಮ ಬೆಳಿಗ್ಗೆ ಐದಕ್ಕೆ ಎದ್ದು ಆಸ್ಪತ್ರೆಗೆ ಹೋಗುವ ಪ್ಲಾನ್ ಇತ್ತು. ಆದರೆ ಬೆಳಿಗ್ಗೆ ನಾಲ್ಕಕ್ಕೇ ಆದ ಹೃದಯಾಘಾತದಿಂದಾಗಿ ಆಸ್ಪತ್ರೆ ಅವರನ್ನು ಬೇಗನೆ ಕರೆಸಿಕೊಂಡಿತ್ತು. ಇದನ್ನೇ ವಿಪರ್ಯಾಸ ಅನ್ನೋದು. ಹತ್ತಾರು ವಿದ್ಯಾವಂತರು ಇರೋ ಮಮತನ ಪಿಜಿಯಲ್ಲಿ ಒಬ್ಬರಿಗೂ ತಲೆಗೆ ಬರ್ಲಿಲ್ಲ ನಮ್ಮಮ್ಮನಿಗೆ ಬಂದ ಎದೆನೋವು ಬರಿ ಎದೆನೋವಲ್ಲ ಹೃದಯಘಾತವಿರಬಹುದೆಂದು.
ಶ್ರೀನಿ ಮತ್ತು ನಾಗೇಶ್ಗೆ ಫ್ಲೈಟ್ ಟಿಕೆಟ್ ತಗೊಳ್ಳೋಕೆ ಕೇಳಿ, ನಾನು ಫೋನಲ್ಲಿ ಕೂತೆ. ಮರುದಿನದ ಮೊದಲನೇ ವಿಮಾನ ಹತ್ತಿದ್ದಾಯ್ತು. ಆ ಇಪ್ಪತ್ಮೂರು ಗಂಟೆಗಳ ಪ್ರಯಾಣ ಎಷ್ಟು ಜನುಮದಲ್ಲೂ ಮರೆಯಲಾಗದ್ದು. ಯಾವುದೊ ಕನ್ನಡ ಸಿನಿಮಾದಲ್ಲಿ ಒಂದು ಸನ್ನಿವೇಶ ಇದೆ. ನಾಯಕನ ತಾಯಿ ತೀರಿಕೊಂಡಿರುತ್ತಾಳೆ ಆದರೆ ನಾಯಕ ದುಃಖ ವ್ಯಕ್ತಪಡಿಸೋ ಸ್ಥಿತಿಯಲ್ಲಿರಲ್ಲ. ಆಗವನು ಬಾತ್ರೂಮಲ್ಲಿ ಕೂತು ಒಬ್ಬನೇ ಅಳ್ತಾನೆ. ಆ ಸನ್ನಿವೇಶ ಮನ ಮುಟ್ಟುವ ಹಾಗಿದ್ದರೂ ನಾಯಕನ ಅಭಿನಯ ನನಗಷ್ಟು ಇಷ್ಟ ಆಗಿರಲಿಲ್ಲ. ಶಾಲಾ ದಿನಗಳಲ್ಲಿ ನಾಟಕದ ಹುಚ್ಚು ಹಿಡಿಸಿಕೊಂಡಿದ್ದ ನಾನು ಮನಸಲ್ಲೇ ಅಂದುಕೊಂಡೆ "ಈ ಪಾತ್ರ ನನಗೆ ಸಿಕ್ಕಿದ್ದರೆ ಎಷ್ಟು ಚೆನ್ನಾಗಿ ನಟಿಸ್ತಿದ್ದೆ!?". ಆ ಒಂದು ಕ್ಷಣದ ಬಯಕೆ ಈಗ ನಿಜವಾಗಿ ದುರ್ದೈವ ಅಟ್ಟಹಾಸ ಮೆರೆದಿತ್ತು. ದಾರಿಯುದ್ದಕ್ಕೂ ಮನಸ್ಸು ದುಗಡಕ್ಕಷ್ಟೇ ಮನೆ ಕೊಟ್ಟಿತ್ತು. ಬೇರಾವ ಭಾವನೆಗಳಿಗೂ ಜಾಗವಿರಲಿಲ್ಲ. ನಾನು ನಾಸ್ತಿಕನೋ ಆಸ್ತಿಕನೋ ಎಂಬುದರ ಅರಿವು ನನಗೆ ಇಲ್ಲದ್ದರಿಂದ, ಸರ್ವಶಕ್ತನಿಂದ ನಾನೆಂದೂ ಏನೂ ಬೇಡಿರಲಿಲ್ಲ. ದೇವರಲ್ಲಿ ಪ್ರಾರ್ಥನೆ ಮಾಡಿದ್ದಾಯಿತು. ಫ್ರಂಕ್ಫುರ್ತ್ ನಿಂದ ಬೆಂಗಳೂರು ವಿಮಾನ ಹತ್ತುವ ಮೊದಲು, ನನ್ನ ಕಸಿನ್ ಮಹೇಶನಿಗೆ ಫೋನಾಯಿಸಿದೆ. ಭಯವೇನಿಲ್ಲವೆಂದು ಡಾಕ್ಟರೆoದರು ಅಂದವನ ದನಿಯಲ್ಲಿ ಧೃಡತೆ ಇಲ್ಲದ್ದು ನನ್ನ ಗಮನಕ್ಕೆ ಬಂದಿತ್ತು. ಕೆಟ್ಟ ಸುದ್ದಿ ಕೇಳುವ ಧೈರ್ಯವಿಲ್ಲದ್ದರಿಂದ ನಾನವನಿಗೆ ಮರುಪ್ರಶ್ನೆ ಹಾಕಲಿಲ್ಲ.
ನರಕದ ಒನ್ ಡೇ ಟ್ರಿಪ್ ನಂತಿದ್ದ ಪ್ರಯಾಣ ಮುಗಿದು ಬೆಂಗಳೂರಿಗೆ ಬಂದಿಳಿದೆ. ಎಕ್ಷಿಟ್ ನ ಆಚೆಯೇ ಕಾದಿದ್ದ ಸೀನನ ಕಣ್ಣುಗಳಲ್ಲಿ ಕಳೆದ ಎರಡು ದಿನ ನಿದ್ದೆ ಮಾಡಿದ ಲಕ್ಷಣವಿರಲಿಲ್ಲ. ಅವನೇನು ಹೇಳಲಿಲ್ಲ ನಾನೇನು ಕೇಳಲಿಲ್ಲ. ಪಾರ್ಕಿಂಗ್ನಲ್ಲಿದ್ದ ಕಾರ್ ಹತ್ತಿ ಡ್ರೈವರ್ ಕೃಷ್ಣನಿಗೆ ಹೊರಡಲು ಹೇಳಿದೆ. ಹತ್ತು ನಿಮಿಷದ ಪ್ರಯಾಣದ ನಂತರ ಸೀನ, "ಉಳಿಸಿಕೊಳ್ಳಲು ತುಂಬಾ ಪ್ರಯತ್ನ ಪಟ್ಟೆವು" ಎಂದಾಗ, ವಿಷಯ ಖಾತ್ರಿಯಾಯ್ತು. ಆಗ ನನಗೇಕೆ ಅಳು ಬರಲಿಲ್ಲ ಎಂದು ನನಗಿನ್ನೂ ಅರ್ಥವಾಗಿಲ್ಲ.
ಅಮ್ಮ ಹೇಗಿದ್ದದ್ದು:
ಬದುಕಿದ್ದಷ್ಟೂ ದಿನ ಕಲ್ಲಿನಂತಿದ್ದ ನನ್ನಮ್ಮ ಒಂದು ದಿನವೂ ಹಾಸಿಗೆ ಹಿಡಿದದ್ದು ನೋಡಿರಲಿಲ್ಲ. ಸೋಮಾರಿತನ, ಜಡತೆಯ ವಿರುದ್ಧಾರ್ಥದ ಸಂಕೇತದಂತಿದ್ದರವರು. ಇಪ್ಪತ್ತು ಆಳುಗಳು ಗದ್ದೆ ಕೆಲಸಕ್ಕೆ ಬಂದರೂ, ಅವರಿಗೆಲ್ಲ ಅಡುಗೆ ಮಾಡುವುದು ನಮ್ಮಮ್ಮನಿಗೆ ಕಷ್ಟವೆನಿಸುತ್ತಿರಲಿಲ್ಲ. ನಾನು ಮೈಸೂರಿನಲ್ಲಿ ಬಿ ಇ ಓದುವಾಗ ಹೀಗೆ ಒಂದು ಭಾನುವಾರ ಬೆಳಿಗ್ಗೆ "ಅಮ್ಮ, ಸ್ನೇಹಿತರೆಲ್ಲ ಶಿವನ ಸಮುದ್ರ ನೋಡಬೇಕಂತೆ, ಇನ್ನು ಮೂರು ಗಂಟೆ ಒಳಗೆ ಮನೆಲಿರ್ತೀವಿ. ಊಟ ಮುಗಿಸಿ, ಫಾಲ್ಸ್ ನೋಡೋಕೆ ಹೋಗ್ತೀವಿ ಅಂತ 'ಅಪ್ಪಣೆ' ಮಾಡಿದ ನನಗೆ ಮೂರು ಗಂಟೆಯಲ್ಲಿ ಹನ್ನೆರಡು ಜನಕ್ಕೆ ಅಡುಗೆ ಮಾಡುವ ಕೆಲಸದಲ್ಲಿ ಎಷ್ಟು ಕಷ್ಟವಿರಬಹುದೆಂಬ ಕಲ್ಪನೆಯೂ ಇರಲಿಲ್ಲ. ಆವತ್ತಿನ ಊಟದ ರುಚಿ ನನ್ನ ಸ್ನೇಹಿತರು ಈವತ್ತು ಮರೆತಿಲ್ಲ.ಅಮ್ಮನ ಆ ಘಾಟಿತನ ಒಂದು ರೀತಿ ನನ್ನನ್ನು ಮರಳು ಮಾಡಿದ್ದರಿಂದಲೇ, ಅವರ ಆರೋಗ್ಯದ ಬಗ್ಗೆ ನಾನಷ್ಟು ಕಾಳಜಿ ಬೆಳಿಸಿಕೊಳ್ಳಲು ಆಗಲಿಲ್ಲ.
ಅಮ್ಮನ ಅನಾರೋಗ್ಯ ಹಾಗು ಚಿಕಿತ್ಸೆ:
ಹೀಗಿದ್ದ ಅಮ್ಮ ನಾನು ಅಮೆರಿಕಾಗೆ ಬಂದ ಕೆಲವು ತಿಂಗಳ ಮೇಲೆ ಮಂಕಾಗಿದ್ದರಂತೆ. ಒಂದೆರಡು ಬಾರಿ ಪ್ರಜ್ಞೆ ತಪ್ಪಿದ್ದುಂಟು. ಎಡಗೈ ನೋವು ಸಹಿಸಲು ಆಗದಿದ್ದಾಗ, ಡಾಕ್ಟರ ಬಳಿ ಹೋಗಿದ್ದಾರೆ. ಎಲ್ಲ ಪರೀಕ್ಷೆಗಳ ಬಳಿಕ ರಕ್ತ ಸಂಚಾರದಲ್ಲಿ ತೊಂದರೆ ಇದ್ದದ್ದು ತಿಳಿದು ಬಂದಿದೆ. ಶಸ್ತ್ರ ಚಿಕಿತ್ಸೆ ಅವಶ್ಯವಿಲ್ಲವೆಂದು ಹೇಳಿದ ಡಾಕ್ಟರರು ಮಾತ್ರೆ ನೀಡಿ ೧ ತಿಂಗಳ ನಂತರ ಬರಹೇಳಿದ್ದಾರೆ. ಆ ಮಾತ್ರೆಯ ಅಡ್ಡ ಪರಿಣಾಮವಾಗಿ ಹೊಟ್ಟೆ ನೋವು ಬಂದಾಗ ಅಮ್ಮನ ಜೊತೆ ಮಾತಾಡಿದ್ದೆ. "ಸ್ವಲ್ಪ ಹೊಟ್ಟೆನೋವು ಬಂದಿತ್ತು" ಅಂದ ಅಮ್ಮನ ದನಿಯಲ್ಲಿ ನೋವಿದ್ದದ್ದು ನನಗೆ ಗೊತ್ತಾಗಿತ್ತು. ನಂತರ ಅಣ್ಣ (ತಂದೆ)ನ ಜೊತೆ ಮಾತಾಡಿದಾಗ ತಿಳಿದದ್ದು ಅದು ಬಾರಿ ಹೊಟ್ಟೆ ನೋವಲ್ಲ, ಭಯಂಕರ ಯಾತನೆ ಎಂದು. ಅಮ್ಮನಂಥ ಅಮ್ಮನನ್ನೇ ನಲುಗಿಸಿದ ಆ ನೋವಿನ ಕಲ್ಪನೆಯೇ ನನ್ನನ್ನು ಭಯ ಪಡಿಸಿತ್ತು. ಆ ಡಾಕ್ಟರರನ್ನು ಮತ್ತೆ ಸಂಪರ್ಕಿಸಿದಾಗ ಅವರೆಂದದ್ದು "ಮಾತ್ರೆ ತೆಗೆದುಕೊಳ್ಳಲೇ ಬೇಕು ಇಲ್ಲದಿದ್ದರೆ ಕೈ ಸ್ವಾದೀನ ತಪ್ಪಬಹುದು" . ಏನೋ ದೊಡ್ಡ ಮನಸ್ಸು ಮಾಡಿ ಡೋಸೇಜ್ ಕಡಿಮೆ ಮಾಡಿಕೊಟ್ಟರು ಪುಣ್ಯಾತ್ಮ ಡಾಕ್ಟರು.
ಅದಾದ ಕೆಲವೇ ದಿನಗಳಲ್ಲಿ ಒಂದು ದಿನ ಅಮ್ಮ ಪ್ರಜ್ಞೆ ತಪ್ಪಿ ಬಿದ್ದಾಗ ಮೈಸೂರಿನ ವಿಕ್ರಂ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಅಲ್ಸರ್ ಆಗಿರುವುದನ್ನು ತಿಳಿಸಿದ ಡಾಕ್ಟರ್, appendix ತೆಗೆಯುವುದು ಅವಶ್ಯ ಇಲ್ಲದಿದ್ದರೆ ಪ್ರಾಣಾಪಾಯವೆಂದು ಹೇಳಿ ಆಪರೇಷನ್ ಮಾಡಿದ್ದಾರೆ. ನಂತರ ಅಮ್ಮ ಸುಧಾರಿಸಿದ್ದರಂತೆ. ಈಗಲೇ appendix ತೆಗೆದಿರುವುದರಿಂದ ಕೈನ ಶಸ್ತ್ರ ಚಿಕಿತ್ಸೆ ಸಾಧ್ಯವಿಲ್ಲವೆಂದು ಹೇಳಿ ಸ್ವಲ್ಪ ದಿನ ವಿಶ್ರಮಿಸಿ, ತಿಂಗಳೊಳಗೆ ಹೃದಯ ತಜ್ಞರನ್ನು ಕಾಣಲು ಹೇಳಿದ್ದಾರೆ. ಅದಕ್ಕಾಗಿಯೇ ಅಮ್ಮ ಎರಡು ವಾರದ ಮೇಲೆ ಬೆಂಗಳೂರಿಗೆ ಬಂದದ್ದು.
ಬೆಂಗಳೂರಿಗೆ ಹೊರಡುವ ಒಂದು ವಾರ ಮುಂಚೆಯೇ, ಬೆಂಗಳೂರಿಗೆ ಬರಲು ಎಲ್ಲ ಸಿದ್ಧತೆ ಮಾಡಿದ್ದರಂತೆ. ಆದರೆ "ಗುಣವಾಗಿ ಬಿಟ್ಟಿದ್ದೇನೆ" ಎಂಬ ಕಲ್ಪನೆಯಲ್ಲಿದ್ದ ಅಮ್ಮ ಎಷ್ಟು ಹೇಳಿದರೂ ಬೆಂಗಳೂರಿಗೆ ಹೋಗಲು ಒಪ್ಪಿರಲಿಲ್ಲ. ನಾವೆಲ್ಲರೂ ಒತ್ತಾಯಿಸಿದ ಮೇಲೆ ಅವರು ಬೆಂಗಳೂರಿಗೆ ಹೊರಟರು. ಮತ್ತೆ ಮನೆಗೆ ಬರಲಾರರೆಂದು ಅವರು ಕಲ್ಪನೆ ಕೂಡ ಮಾಡಿರಲಿಲ್ಲ. ಅದಕ್ಕಾಗಿಯೇ ಅವರು ಕಾರ್ ಕೂಡ ಬೇಡೆಂದು ಹೇಳಿ ಬಸ್ಸಿನಲ್ಲಿ ಹೊರಟಿದ್ದು.
ಇಲ್ಲಿ ಬಹಳ ಕಡೆ ನಾನು ಅಂತೆ-ಕಂತೆ ಅಂದು ಬರೆದದ್ದೇಕೆಂದರೆ ಬಹುಪಾಲು ವಿಷಯಗಳು ನನಗೆ ತಿಳಿದಿರಲಿಲ್ಲ. ದೂರದಲ್ಲಿರುವ ಮಗನಿಗೇಕೆ ಬೇಡದ ಟೆನ್ಶನ್ ಎಂಬುದು ಅಮ್ಮನ ಯೋಚನೆ ಆಗಿತ್ತು. ಹಾಗಾಗಿ ನನಗೆ ಯೋಚನೆ ತರುವಂಥ ಯಾವುದೇ ವಿಷಯ ತಿಳಿಯದಂತೆ ನೋಡಿಕೊಂಡಿದ್ದರು.
ತಪ್ಪಿದ್ದೆಲ್ಲಿ?:
ನನ್ನನ್ನು ಕಂಗಾಲಿಗಿಸುವ ಪ್ರಶ್ನೆ. ಹೈ ಡೋಸೇಜ್ ಕೊಟ್ಟು ಅಲ್ಸರ್ ಬರಲು ಕಾರಣರಾದ ಡಾಕ್ಟರ್?
ಅಮ್ಮನಿಗೆ ಹುಷರಿಲ್ಲವೆಂದು ಸಣ್ಣ ಸುಳುಹು ಸಿಕ್ಕ ತಕ್ಷಣ ಅದನ್ನೇ ಮೊದಲ ಕರ್ತವ್ಯವಾಗಿಸಿಕೊಳ್ಳದೆ ಮೈ ಮರೆತ ನಾನು?
ಹೃದಯಾಘಾತವನ್ನು ಗುರುತಿಸಲಾರದ ವಿದ್ಯಾವಂತರ ಅಸಹಾಯಕತೆ?
ಮಗನ ನಿಶ್ಚಿಂತೆ ತನ್ನ ಆರೋಗ್ಯಕ್ಕಿಂತ ಮುಖ್ಯವೆಂದುಕೊಂಡ ಅಮ್ಮನ ದೌರ್ಬಲ್ಯ?
ಈ ಪ್ರಶ್ನೆಗಳು ನನ್ನನ್ನು ಎಂದೆಂದೂ ಕಾಡುತ್ತವೆ.
ಕೊನೆಯ ಮಾತು:
ಅಮ್ಮ ಬೆಂಗಳೂರಿಗೆ ಬಂದ ಹಿಂದಿನ ದಿನ ಆಯುಧ ಪೂಜೆ. ಕಾರ್ ತೊಳೆದು ಪೂಜೆ ಮಾಡಿಸಿದೆ ಎಂದು ನಾನಂದಾಗ ಅಮ್ಮನಿಗೆ ಸಂತೋಷ . ಮಗನಿಗೆ ಅಪರೂಪಕ್ಕೆ ಒಳ್ಳೆ ಬುದ್ಧಿ ಬಂತಲ್ಲ ಅಂತ. ಮತ್ತಿನ್ನೇನು ಮಾಡಿದೆ ಅಂತ ಅವರು ಕೇಳಿದಾಗ 'ಇನ್ನೇನಿಲ್ಲ ಮನೆ ಕ್ಲೀನ್ ಮಾಡಿ ಆಯಿತು. ಈಗ ದನ ಕರು ತೊಳೆಯೋಕೆ ಹಳ್ಳಕ್ಕೆ ಹೋಗ್ಬೇಕು ಅಂತ ತಮಾಷೆ ಮಾಡಿದ್ದೆ. ಅಮ್ಮ ಮನಸ್ಪೂರ್ತಿ ನಕ್ಕಿದ್ದರು. ಅದಾದ ಮೇಲೆ ಮತ್ತೆ ಅಮ್ಮನ ಜೊತೆ ಮಾತಾಡೋ ಭಾಗ್ಯ ನಂಗೆ ಸಿಗಲಿಲ್ಲ. ನಾನು ಫೋನ್ ಮಾಡಿದರೆ ಅಮ್ಮ ಯಾವತ್ತು 'ಹಲೋ' ಅಂದಿದ್ದಿಲ್ಲ. "ಹೇಳೋ ಮಗನೆ" ಅಂತಿದ್ದರು. ಇನ್ನು ಮೇಲದು ನೆನಪಷ್ಟೇ.
ಈ ಚಡಪಡಿಕೆ ತುಂಬಾ ದಿನಗಳಿಂದ ಇತ್ತು. ಆದರೆ ಇದನ್ನ ಒಂದು ಕಡೆ ಬರೆದಿಡೋಕೆ ಧೈರ್ಯ ಬಂದಿರಲಿಲ್ಲ. ನಾಲ್ಕು ತಿಂಗಳ ನಂತರ ಇದನ್ನ ಬರೀತಾ ಇದ್ದೀನಿ. ಇದನ್ನ ಮತ್ತೆ ಓದೋ ಧೈರ್ಯ ಕೂಡ ನನಗೀಗ ಇಲ್ಲ. ತೋಚಿದ್ದನ್ನ ಬರೆದು ಮುಗಿಸುವಷ್ಟರಲ್ಲಿ ಮನಸ್ಸಿಗೆ ದುಖ, ಒಮ್ಮೆ ನಗು, ಭೂಮಿ ಕುಸಿದಂಥಾ ಭಾವ ಹೀಗೆ ಹತ್ತಾರು ಭಾವನೆಗಳು ಬಂದು ಹೋದವು. ಮೊದಲೇ ಹೇಳಿದಂತೆ ಬಹಳ ದಿನಗಳಿಂದ ಕಾಡುತ್ತಿದ್ದ ಚಡಪಡಿಕೆ ಸದ್ಯಕ್ಕೆ ಕಡಿಮೆಯಾದಂತೆನಿಸುತ್ತಿದೆ. ಮುಂದಿನ ಭಾರ ದೇವರ ಮೇಲೆ.
"All that I am or ever hope to be, I owe to my angel Mother." -- Abraham Lincoln
While reading this article the last para became blurred , then I realised its my tears causing the blurrness. Really heart touching one. You are right, mother is mother, and no other alternatives for her love. And its not a finite thing too.. it will be still with you for ever.
ReplyDeleteSrini
motheres are always unique being on this earth. What facinates me is their unconditional love towards their children. I have seen manay a times children unwittngly doesnt bother much about their mothers health, but the other way its not true. Mothers are always caring. There is no substitue for her.
ReplyDeleteindra
Rightly said Indra. There is no comparison to mother's love.
Delete