Sunday, July 7, 2013

ಆಶಯ

ಬರಡು ನೆಲದಂತೆಯೆ
ನನ ಬಿರಿದ ಹೃದಯ
ಬಯಸುವುದು ನಾಲ್ಕು ಹನಿ
ಪ್ರೀತಿ ಸಿಂಚನವಷ್ಟೆ.

ದೂರದಿಂದಲಿ ಬಂದು
ಉರಿವ ರವಿಯನು ಮುಚ್ಚಿ
ಮನಕೆ ಆಸೆಯ ಹಚ್ಚಿ
ಹೋಗದಿರು ತೇಲಿ,
ಬರಿ ಒಂದು ಚಲಿಸುವ ಮೋಡವಾಗಿ.
ನಿಂತು ಮಳೆ ಸುರಿಸು
ಒಲವ ಬೆಳೆ ಬೆಳೆಯಲಿ.

PS: ಚಲಿಸುವ ಮೋಡ = passing cloud ಎಂಬರ್ಥದಲ್ಲಿ.

Monday, July 1, 2013

2013 ನಡು ವರುಷದ ಬಿಡುವಿಗೆ - ಕೆಲ ಕನ್ನಡ ಹಾಡುಗಳು


ಮೊನ್ನೆ ಸ್ವಲ್ಪ ಬಿಡುವಿತ್ತು. ಯುಟ್ಯುಬ್ ನಲ್ಲಿ ಹೊಸ ಕನ್ನಡ ಹಾಡುಗಳನ್ನ ಹಾಗೆ ಬ್ರೌಸ್ ಮಾಡ್ತಾ ಇದ್ದಾಗ ನಿಜಕ್ಕು ಆಶ್ಚರ್ಯ. ನೋಡಿದ ಹತ್ತು ಹನ್ನೆರಡು ಹಾಡುಗಳಲ್ಲಿ ನಾಲ್ಕು ಹಾಡುಗಳು ತುಂಬಾನೆ ಹಿಡಿಸಿದ್ವು. ಸಾಮನ್ಯವಾಗಿ ಹೀಗಾಗಲ್ಲ. ಹೊಸ ಕನ್ನಡ ಸಿನೆಮಾಗಳಲ್ಲಿ ಸಾಹಿತ್ಯ ಅನ್ನೋದು ಮಾರತ್ ಹಳ್ಳಿಯಲ್ಲಿ ಕನ್ನಡದೊರನ್ನ ಹುಡುಕಿದ ಹಾಗೆ ಅನ್ನೊ ನನ್ನದೇ ಅಭಿಪ್ರಾಯವನ್ನ ಸುಳ್ಳಾಗಿಸಿದವು ಈ ಹಾಡುಗಳು.
ವಿಶೇಷ ಏನಂದ್ರೆ, ಈ ಎಲ್ಲ ಹಾಡುಗಳೂ ವಿಭಿನ್ನ.  ಶೈಲಿಯಲ್ಲಾಗಲಿ, ಒಟ್ಟಾರೆ ಕವನದ ಆಶಯದಲ್ಲಾಗಲಿ ಈ ಹಾಡುಗಳಲ್ಲಿ ಒಂದಕ್ಕೊಂದು ಹೋಲಿಕೆ ಇಲ್ಲ. ಇದಾಗಲೇ ಈ ಹಾಡುಗಳು ನನ್ನ ಜಂಗಮವಾಣಿಯ ಹೊಳಹೊಕ್ಕು ಆರೇಳು ಬಾರಿ ತಿರುವಿ ಹಾಕಿಸಿಕೊಂಡು ಕೇಳಿಸಿವೆ. ಇನ್ನೂ ಸ್ವಲ್ಪ ದಿನಗಳ ಮಟ್ಟಿಗೆ ಇವು most played ಲಿಸ್ಟ್ ನಲ್ಲಿ ಉಳಿಯುವ ಎಲ್ಲ ಲಕ್ಷಣಗಳೂ ಇವೆ.

೧. ದೇವರೆ, ಅಗಾಧ ನಿನ ಮಹಿಮೆಯ ಕಡಲು (ಡೈರಕ್ಟರ್ಸ್ ಸ್ಪೆಷಲ್)
ದೇವರ ಲೀಲೆ, ಅವನ ಸೃಷ್ಟಿಯಲ್ಲಿನ ವಿಪರ್ಯಾಸ, ವಿರೋಧಾಭಾಸಗಳನ್ನು ಬಿಂಬಿಸುವ ಹಾಡು.

೨. ಹೆದರಬ್ಯಾಡ್ರಿ ಅಂತ ಗಂಡಗೆ ಧೈರ್ಯ ಕೊಟ್ಟಾಳ್ರೀ.. (ಕಡ್ಡಿಪುಡಿ)
ಉತ್ತರ ಕರ್ನಾಟಕ ಶೈಲಿಯ ನವಿರು ಹಾಸ್ಯದ ಹಾಡು. ಜಾನಪದ ಹಾಡಿನ ಹಾಗಿದೆ.

೩. ಬೇರೆ ಯಾರೊ ಬರೆದಂತಿದೆ ಸಾಲನು.. (ಕಡ್ಡಿಪುಡಿ)
ಜಯಂತ್ ಕಯ್ಕಿಣಿ ಸರ್ ಗೆ ನಮಸ್ಕಾರ. ಅದ್ಭುತ ಸಾಹಿತ್ಯ.

೪. ತಿನ್ಬೇಡಕಮ್ಮಿ (ಲುಸಿಯ)
ಯುಟ್ಯುಬ್ ನ ಮೊದಲ ಪ್ರತಿಗಿಂತ ಸ್ವಲ್ಪ ಪರಿಷ್ಕರಣೆಯಾಗಿದೆ. ಮಂಡ್ಯ ಮಣ್ಣಿನ ಸೊಗಡು, pop song ನ ಝಲಕ್ ಎರಡೂ ಒಂದೆ ಪ್ಯಾಕ್ ನಲ್ಲಿ. "ಯಾರಾದ್ರು ಕೈ ಕೊಡ್ಲಿ ಊರೆಲ್ಲ ಆಡ್ಕಳ್ಳೀ ಉಣ್ಣಕ್ಕಿಕ್ಕಿ ಬೆಣ್ಣೆ ತಿನ್ಸೋಳ್ ಅವ್ವನೆ ಕಮ್ಮಿ" ಅನ್ನೊ ಸಾಲು ಬರೆದ ಪೂರ್ಣ ಚಂದ್ರನಿಗೆ ಒಂದು ಸಲ್ಯೂಟ್.

ಇನ್ನು ಉಳಿದಂತೆ: ಲುಸಿಯಾದ ಜಮ್ಮಜಮ್ಮ ಚೆನ್ನಾಗಿದೆ. ಅದೇ ಚಿತ್ರದ ಯಾಕೋ ಬರ್ಲಿಲ್ಲ ಹಾಡಿನ ಆರಂಭ ಹಿಡಿಸಿತಾದರು ಹಾಡಿನಲ್ಲಿ ಪದಗಳ ಪುನರಾವರ್ತನೆ ಹೆಚ್ಚಾಯಿತೆನೊ ಅನ್ನಿಸ್ತು. ನಮ್ ದುನಿಯ ನಂ ಸ್ಟೈಲ್ ನಲ್ಲು ಒಂದೆರಡು ಹಾಡುಗಳು ಪರವಾಗಿಲ್ಲ.