Saturday, September 29, 2012

ಬಿಟ್ಟು ಹೋಗುವ ಮುನ್ನ


೨೦೧೨ ಮಾರ್ಚ್ ಎರಡನೇ ವಾರ. ಟಿಸಿಎಸ್ ನಲ್ಲಿ ಇನ್ನೆರಡು ಮೂರು ದಿನಗಳಷ್ಟೆ ಉಳಿದಿದ್ವು. ಐದೂವರೆ ವರ್ಷಕ್ಕು ಹೆಚ್ಚು ಕಾಲ ಕೆಲ್ಸ ಮಾಡಿದ ಜಾಗ ಬಿಟ್ಟು ಮೈಸೂರಿಗೆ ಹೊರಡಲು ಮಾನಸಿಕ ಸಿದ್ಧತೆ ನಡೆದಿತ್ತು. ಐದೂವರೆ ವರ್ಷದಲ್ಲಿ ಅಲ್ಲಿ ಪಡೆದದ್ದು ಕಳೆದದ್ದೆಲ್ಲದರ ಫ್ಲಾಶ್ ಬ್ಯಾಕ್ ಫಾಸ್ಟ್ ಫಾರ್ವರ್ಡ್ ಪ್ರಕಾರದಲ್ಲಿ ಕಣ್ಣ ಮುಂದೆ ತೇಲಿಹೋಗ್ತಿತ್ತು. 

ಸರಿ, ಅದಾಗಿ ಆರು ತಿಂಗಳು ಕಳೀತು. ಅದರ ಬಗ್ಗೇನೆ ಬರೀತಾ ಹೋದ್ರೆ, ಒಂದು ಪೂರ್ತಿ ದಿನ ಬೇಕು. ಸದ್ಯಕ್ಕೆ ವಿಷ್ಯ ಏನಪ್ಪಾ ಅಂದ್ರೆ, ನಾನು ಟಿಸಿಎಸ್ ಬಿಡೊ ಸಮಯದಲ್ಲಿ, ಅಲ್ಲಿನ ಕನ್ನಡ ಗೆಳೆಯರಿಗೊಸ್ಕರ ನಾಲ್ಕು ಸಾಲು ಬರೆದಿದ್ದೆ. ಅದನ್ನ ಇಲ್ಲಿ ನನ್ನ ನೆನಪಿನ ಡಬ್ಬಿಯಲ್ಲಿ ಜೋಪಾನ ಮಾಡಿಡ್ತಾ ಇದೀನಿ. ಆರು ತಿಂಗಳು ಬಿಟ್ಟು ಇದನ್ನೋದಿದಾಗ ಮನಸ್ಸಿಗೆ ಏನೊ ಖುಷಿ ಆಗ್ತಿದೆ. ಇನ್ನು ಆರು ವರ್ಷ ಬಿಟ್ಟು ಯಾವಗ್ಲೊ ಬೇಕಂದಾಗ ಒಂದ್ ಸಲ ಮತ್ತೆ ಓದಿ ನೆನಪುಗಳನ್ನ ರಿವೈಂಡ್ ಮಾಡಿಕೊಂಡ್ರೆ ಏನನ್ನಿಸುತ್ತೋ ನನಗೀಗ ಗೊತ್ತಿಲ್ಲ. ನೋಡುವ.

ಇನ್ನೊಂದ್ ವಿಷ್ಯ. ನಾ ಬರೆದ ಸಾಲುಗಳಿಗೆ ಚಂದನ್, ವಿಜಯ ಮತ್ತು ಶ್ರೀನಿಯವರು ಬರೆದಿದ್ದ ಪ್ರತಿಕ್ರಿಯೆಗಳು ಸೊಗಸಾಗಿದ್ದವು. ಅದನ್ನೂ ಹುಡುಕಿ ಹಾಕಬೇಕು. ಅದು ಆಮೇಲೆ!

ಹೀಗಿತ್ತು ನನ್ ಟಾಟಾ ಗೀತೆ:

ಕುಡ್ದೊರಂಗ್ ಆಡ್ತಾನೆ ವಿನಯ ಅನ್ಬಾರ್ದು
ಇದ್ದಿದ್ದಂಗ್ ಹೇಳ್ತೀನಿ ನಂಗೊತ್ ನನ್ ದರ್ದು.

ಅವ್ರ್ ಸ್ಟಾಪು ಬಂದಾಗ ಬಸ್ ಇಳಿಯೋ ಹಂಗ್ ಜನ್ರು
ಇಲ್ ಬಿಟ್ ಅಲ್ಗ್ ಹೊಂಟೀನಿ ಬಂತು ನಮ್ಮೂರು.

ಒಂದೊತ್ ಒಟ್ಗ್ ಉಂಡ್ ಮೇಲೆ ಅಣ್ತಮ್ರಂಗ್ ನಾವು
ಒಟ್ಗಿರ್ಬೇಕ್ ನಗ್ ನಗ್ತಾ ಏನಿದ್ರೂ ನೋವು.

ಇಷ್ಟ್ ವರ್ಷ ಇಲ್ ನಂಗೆ ಸಿಕ್ ಫ್ರೆಂಡ್ಸೇ ಆಸ್ತಿ
ದೇವ್ರಾಣೆ ದೇವ್ರ್ ಕೇಳೋಕೆ ಏನಿಲ್ಲ ಜಾಸ್ತಿ.

ಎಂದಾರ ಒಂದಿವ್ಸ ಮೈಸೂರ್ಗ್ ನೀವ್ ಬಂದ್ರೆ
ಕಾಲ್ ಮಾಡೋದ್ ಮರಿಬೇಡಿ ನಿಮ್ಗಾಗ್ದು ತೊಂದ್ರೆ.

ಬಸ್ ಇಳ್ದೊರ್ ಬಸ್ ಹತ್ಬೇಕ್ ಊರ್ ಸುತ್ಬೇಕ್ ಇನ್ನಾ
ಮತ್ತೊಂದ್ಸಾರ್ ಒಂದ್ ಬಸ್ನಾಗ್ ನಾವ್ ಸಿಕ್ರೆ ಚೆನ್ನ!

Tuesday, September 11, 2012

ಹಸಿವಾಗದಾಗ


ಪ್ರತಿದಿನವು ಹೊರಗುಂಡು
ನಾಲಿಗೆಯು ರುಚಿ ತಪ್ಪಿ
ಸರಿಯಾದ ಕಾಲಕ್ಕೆ
ಹಸಿವಾಗದಿರಲು
ಫುಡ್ ಕೋರ್ಟಿನಲಿ ಕೂತು
ಫುಲ್ ಮೀಲ್ಸು ಮುಂದಿಟ್ಟು
ಬೇಜಾರಿನಲಿ ಒಮ್ಮೆ
ಲೊಚಗುಟ್ಟಿ ತಲೆ ಕೆರೆದು
ಹಣೆ ಸವರಿ ಎಡ ತಿರುಗಿ
ಕಣ್ಣೆತ್ತಿ ನೋಡಿದರೆ
ಹಸಿರು ಚೂಡಿಯ ತೊಟ್ಟ
ಸರಳ ಸುಂದರಿ ಅವಳು
ಕಣ್ಣಲ್ಲಿ ಕಣ್ಣಿಟ್ಟು
ತುಟಿಯಂಚಿನಲಿ ಹಾಗೇ
ನಗುವೊಂದನೆಸೆದರೆ...
...
ನನಗದೇ ಅಪಟೈಸರ್!!